top of page

ದೇವಾಲಯದ ಇತಿಹಾಸ

           ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಶರಾವತಿ ಕಣಿವೆ ಪ್ರದೇಶದಲ್ಲಿ ಪವಿತ್ರವಾದ ಶರಾವತಿ ನದಿಯ ತಟದಲ್ಲಿರುವ ಕಾರ್ಗಲ್ ಪಟ್ಟಣದ ಶಕ್ತಿದೇವತೆಯಾಗಿ ನೆಲೆಗೊಂಡಿರುವ ಶ್ರೀ ಚೌಡೇಶ್ವರಿ ದೇವಿಯು ಕಷ್ಟವೆಂದು ಹೇಳಿಕೊಂಡು ಬಂದ ಭಕ್ತರ ಪಾಲಿಗೆ ವರವನ್ನು ಕರುಣಿಸುವ ಕರುಣಾಮಯಿಯಾಗಿದ್ದಾಳೆ. ಶ್ರೀ ಕ್ಷೇತ್ರವು ಭಕ್ತರು ಅರಸಿ ಬಂದು ದರ್ಶನ ಪಡೆಯುತ್ತಿರುವ ದೇವಾಲಯವಾಗಿ ರೂಪುಗೊಂಡಿದೆ. 


            ಶರಾವತಿ ಕಣಿವೆಯು ವಿದ್ಯುತ್ ಉತ್ಪಾದನೆಯ ಮೂಲಕ ನಾಡಿಗೆ ಬೆಳಕನ್ನು ನೀಡುತ್ತಿರುವ ಪ್ರದೇಶ. ಕಡಲ ತೀರದ ಹೊನ್ನಾವರ ತಾಲ್ಲೂಕಿನ ಮಂಕಿ ಎಂಬ ಊರಿನಲ್ಲಿ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿ, ಇಲ್ಲಿ ಅಣೆಕಟ್ಟು ಮತ್ತು ಜಲವಿದ್ಯುದಾಗರಗಳ ನಿರ್ಮಾಣ ಕಾಲಘಟ್ಟದಲ್ಲಿ 1964ರ ಆಸುಪಾಸಿನಲ್ಲಿ ವಲಸೆ ಬಂದು ಕೇಂದ್ರ ಪ್ರದೇಶವಾದ ಕಾರ್ಗಲ್‍ನಲ್ಲಿ ವ್ಯಾಪಾರವನ್ನು ಆರಂಭಿಸಿದ ಸುಭಾಷ್ ರಾಮ ಮಹಾಲೆ ಕುಟುಂಬ ಮುಂದೊಂದು ದಿನ ಅದೆಷ್ಟೋ ಭಕ್ತರ ಆರಾಧ್ಯ ದೈವವಾಗಿರುವ ಶರಾವತಿ ಕಣಿವೆಯ ಶಕ್ತಿ ದೇವತೆಯ ದೇಗುಲದ ನಿರ್ಮಾಣಕರ್ತರಾಗಿದ್ದು ಇತಿಹಾಸವಾಗಿದೆ. 


         ಸುಭಾಷ್ ಮಹಾಲೆ ಅವರ ಕನಸಿನಲ್ಲಿ ಉದ್ಯಮಕ್ಕಾಗಿ ಖರೀದಿಸಿದ ಜಮೀನಿನ ಮುಂಭಾಗದಲ್ಲಿ ಆದಿಶಕ್ತಿ ನೆಲೆಸಿದ್ದು ಉದ್ಯಮದ ಜೊತೆ ಆ ಕ್ಷೇತ್ರವನ್ನೂ ಅಭಿವೃದ್ಧಿಪಡಿಸಲು ತಮ್ಮ ಕುಲದೇವಿಯಾದ ಶ್ರೀ ಮಹಾಲಸಾ ನಾರಾಯಣಿ ದೇವಿಯಿಂದ ಪ್ರೇರೆಪಣೆಯಾಯಿತು. ಕನಸಿನ ವಿಚಾರವನ್ನು ಕುಲಗುರುಗಳಾದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೊತ್ತಮ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಪಾದಂಗಳವರ ಬಳಿ ವಿಚಾರಿಸಲಾಗಿ ಆದಿಶಕ್ತಿಯ ಇರುವಿಕೆಯನ್ನು ಗುರುಗಳು ಖಚಿತಪಡಿಸಿ “ಇದು ಅದ್ಭುತವಾದ ಶಕ್ತಿಯಿರುವ ಸ್ಥಳ, ಮುಂದೆ ಒಂದು ದಿನ ಇದು ಪುಣ್ಯಕ್ಷೇತ್ರವಾಗುವ ಲಕ್ಷಣಗಳಿಂದ ಕೂಡಿರುವ ಸ್ಥಳ” ಎಂದು ವಿವರಿಸಿ ಅಭಿವೃದ್ಧಿಪಡಿಸುವಂತೆ ಅನುಗ್ರಹಿಸಿದರು. ಋಷಿ ಮುನಿಯೊಬ್ಬರು ತಪಸ್ಸಿನ ಬಲದಿಂದ ದೇವಿಯ ಶಕ್ತಿಯನ್ನು ಒಲಿಸಿಕೊಂಡಿರುವ ಪುಣ್ಯಸ್ಥಳವೆಂದು, ತಪಸ್ಸು ಮಾಡಿದ ಋಷಿ ಮುನಿಯು ಇಲ್ಲಿನ ಹುತ್ತದಲ್ಲಿಯೇ ಸಿದ್ಧಪುರುಷನ ನಾಮದಲ್ಲಿ ಸದಾ ಜಾಗೃತನಾಗಿದ್ದಾರೆ ಎಂಬ ಸತ್ಯವನ್ನು ಗೋವಾ ಕುಲದೇವಿಯ ಗ್ರಾಮಪುರುಷರ ದರುಶನದ ಆವೇಶದಲ್ಲಿ ಕಂಡುಕೊಳ್ಳಲಾಯಿತು. 


         ಗುರುಗಳ ಆದೇಶದಂತೆ ಪ್ರಥಮವಾಗಿ ಸಣ್ಣ ಗುಡಿಯನ್ನು ನಿರ್ಮಿಸಲಾಯಿತು ನಂತರ ಸಮಾಜದ ಅನೇಕ ವ್ಯಕ್ತಿಗಳ ಸಹಕಾರದಿಂದ 1990ರ ದಶಕದಲ್ಲಿ ಕಣಿವೆ ಪ್ರದೇಶದಲ್ಲಿ ದೇವಾಲಯ ನಿರ್ಮಾಣ ಕಾರ್ಯವನ್ನು ಆರಂಭಿಸಲಾಯಿತು. ಚೋಳ ಶೈಲಿಯ, ಪ್ರಾಚೀನ ಕೆತ್ತನೆಗಳ ಕಲಾಕೃತಿಗನ್ನೊಳಗೊಂಡ ಸುಂದರ ಮಾದರಿಯ ದೇವಾಲಯ, ರಾಜಗೋಪುರದ ಮಾದರಿಯಲ್ಲಿ ಮಹಾದ್ವಾರ, ಪ್ರಾಚೀನ ಶೈಲಿಯ ಏಕಶಿಲಾ ಮಾನಸ್ತಂಭ, ಸಪ್ತಕಳಶದ ಗೋಪುರ ಒಳಗೊಂಡಂತೆ ಸುಂದರ ದೇವಾಲಯ ನಿರ್ಮಾಣವಾಯಿತು. ದೇವಾಲಯದ ನಿರ್ಮಾಣದೊಂದಿಗೆ ಗುರುಗಳ ವಾಸ್ತವ್ಯಕ್ಕೆ ಅನುಕೂಲವಾಗುವಂತೆ ಶ್ರೀ ವಿದ್ಯಾಧಿರಾಜ ಸಭಾಗೃಹ, ಶುಭ ಕಾರ್ಯಗಳನ್ನು ನಡೆಸಲು ಶ್ರೀ ಚೌಡೇಶ್ವರಿ ಕಲ್ಯಾಣ ಮಂಟಪ ಹಾಗೂ ಶ್ರೀ ದ್ವಾರಕಾನಾಥ ಸಭಾಭವನವು ಲೋಕಾರ್ಪಣೆಗೊಂಡವು.


        1998ರಲ್ಲಿ ದೇವಾಲಯದ ಪ್ರತಿಷ್ಠಾಪನಾ ಉತ್ಸವವನ್ನು ನಾಡಿಗೆ ಮಾದರಿಯಾಗುವಂತೆ ವೈಭವೋಪೇತವಾಗಿ ನಡೆಸಲಾಯಿತು. ಉತ್ಸವಕ್ಕೆ ಸಾನಿಧ್ಯ ವಹಿಸಿದ್ದ ಪರ್ತಗಾಳಿ ಮಠಾಧೀಶರಾದ ಶ್ರೀಮದ್ ಶ್ರೀ ವಿದ್ಯಾಧಿರಾಜ ತೀರ್ಥರನ್ನು ಸಿಂಗರಿಸಿದ ರಥದಲ್ಲಿ ಪೂರ್ಣಕುಂಭ ಸ್ವಾಗತವನ್ನು ನೀಡಿ ವಿವಿಧ ಕಲಾ ಮೇಳಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಪೂಜ್ಯ ಗುರುವರ್ಯರ ಮಾರ್ಗದರ್ಶನ ಹಾಗೂ ಉಪಸ್ಥಿತಿಯಲ್ಲಿ ಗರ್ಭಗುಡಿಯಲ್ಲಿ ಅಷ್ಠ ದೇವರುಗಳ ಪ್ರತಿಷ್ಠಾಪನೆ ನೆರವೇರಿತು. ಏಳು ದಿನಗಳ ಕಾಲ ನೆರವೇರಿದ ಉತ್ಸವದಲ್ಲಿ ಪ್ರತಿನಿತ್ಯ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಅನ್ನಸಂತರ್ಪಣಾ ಕಾರ್ಯವೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಎಂದೂ ಮರೆಯಲಾಗದ ಉತ್ಸವವಾಗಿ ಜರುಗಿತು. ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಭಕ್ತರು ಉತ್ಸವವನ್ನು ಕಣ್ತುಂಬಿಕೊಂಡರು. 


       ದೇವಾಲಯದ ಧರ್ಮದರ್ಶಿಗಳಾಗಿ ಹಲವಾರು ಸಾಮಾಜಿಕ ಸೇವೆಗಳನ್ನು ಸಲ್ಲಿಸುತ್ತಾ ಕ್ಷೇತ್ರಕ್ಕೆ ಆಗಮಿಸಿದ ಭಕ್ತರಿಗೆ ದರುಶನದ ಮುಖೇನ ಮಾರ್ಗದರ್ಶನ ನೀಡುತ್ತಿದ ಶ್ರೀ ಸುಭಾಷ ರಾಮ ಮಹಾಲೆಯವರು 2002ರಲ್ಲಿ ಇಹಲೋಕ ತ್ಯಜಿಸಿದ ನಂತರದಲ್ಲಿ ಅವರ ಹಿರಿಯ ಪುತ್ರರಾದ ಶ್ರೀ ವಿನೋದ್ ಸುಭಾಷ ಮಹಾಲೆಯವರು ಶ್ರೀ ಕ್ಷೇತ್ರದ ಧರ್ಮದರ್ಶಿಗಳಾಗಿ ದೇವಾಲಯವನ್ನು ಶ್ರೀ ದೇವರ ಅಭಯದಿಂದ ಹಾಗೂ ಮಾರ್ಗದರ್ಶನದಲ್ಲಿ ಮುನ್ನಡೆಸುತ್ತಿರುವುದನ್ನು ಕಾಣಬಹುದಾಗಿದೆ.

strip-1.jpg

ಪರಿವಾರ ದೇವರು 

ದರ್ಶನ ಸೇವೆ

ವಿಶೇಷ ದಿನಗಳು

Social Links

Follow us on Facebook and YouTube to keep yourself updated.

  • Facebook
  • YouTube
  • Instagram
  • Whatsapp

2024 ಶ್ರೀ ಚೌಡೇಶ್ವರಿ ಪ್ರತಿಷ್ಠಾನ, ಕಾರ್ಗಲ್

bottom of page